ಶುಕ್ರವಾರ, ಡಿಸೆಂಬರ್ 12, 2008

ಪ್ರೀತಿ ಎಂಬ ಅಮರ ಕಾವ್ಯ.. !!

ನೋವಿನಲ್ಲೂ ಆನಂದ ಕೊಡುವ
ಅಸಾಮಾನ್ಯ ಭಾವ,
ಗಾತ್ರ -ಸ್ವರೂಪವಿಲ್ಲದಿದ್ದರೂ ಎಲ್ಲ
ಅಡಗಿಸಿಕೊಂಡ ನಿಧಿ,

ಪ್ರೀತಿ ಎಂದರೆ...!
ಮೈತಳೆದು ನಿಲ್ಲುವ
ಸಾಹಿತ್ಯ ಸೊಡರಿನ
ಮೂಲ ದ್ರವ್ಯ,
ಅಳಿಯದೆ ಉಳಿಯುವ
ಕಣ್ಣಿದ್ದು ನೋಡಲಾಗದ
ದಿವ್ಯ ಶಕ್ತಿ,

ಪ್ರೀತಿ ಎಂದರೆ..!!
ಬೆಳಕಿಲ್ಲದ ರಾತ್ರಿಯಲ್ಲೂ
ಕಾಣಿಸುವ ವಸಂತದ ಹಗಲು,
ಕಷ್ಟ-ಸುಖ ,ತ್ಯಾಗ-ಬಲಿದಾನಗಳಲ್ಲೂ
ಪ್ರಹವಿಸುವ ಜೀವನದಿ,

ಪ್ರೀತಿ ಎಂದರೆ..!!
ಎಲ್ಲಿಯೂ ಇಲ್ಲವೆಂದರೂ
ಎಲ್ಲೆಲ್ಲೂ ಪಸರಿಸಿದ
ಕಣ್ಣಿಲ್ಲದ ನೋಟ,
ಹಾಳೆಯಲ್ಲಿ ಕುಂಚವಿಲ್ಲದೆ ಚಿತ್ರಿಸುವ
ಅಂಟಿದರೂ ಅಂಟದಂತಿರುವ
ಸುರಮ್ಯ ಕಲೆ,

ಪ್ರೀತಿ ಎಂದರೆ..!!
ಒಮ್ಮೆಯೂ ಗೋಚರಿಸದ
ಕಣ್ಣಿಲ್ಲದೆ ನೋಡಬಹುದಾದ
ಅನುಪಮ ರೂಪರಾಶಿ,
ಅನಕ್ಷರಸ್ತರೂ ಓದಬಹುದಾದ
ಅಕ್ಷರಗಳಿಲ್ಲದ ಅಮರ ಕಾವ್ಯ [ಪುಸ್ತಕ],

ಪ್ರೀತಿ ಎಂದರೆ..!!
ಭಾವದ ಬಸಿರಿಗೆ
ಜೀವ ಸ್ಪರ್ಶ ಕೊಡುವ
ನವಿರಾದ ಕನಸು
ನೀರನ್ನೆ ಕೆತ್ತಿ ಸೃಷ್ಟಿಸಿದ
ಹೃದಯ ನಾಕದ ಅಪೂರ್ವ ಶಿಲ್ಪ,

ಪ್ರೀತಿ ಎಂದರೆ..!!
ಎಷ್ಟೇಲ್ಲಾ ಓದಿದರೂ ಮುಗಿಯದ
ಬರೆದರೂ ಬರಿದಾಗದ
ಲಿಪಿಯಿಲ್ಲದ ಭಾಷೆ,
ಪ್ರೀತಿ ಎಂದರೆ.. ಪ್ರೀತಿ
ಪ್ರೀತಿ.. ಎಂದರೆ..ಪ್ರೀತಿ
ಪ್ರೀತಿಯೇ ಪ್ರೀತಿ...!!