ಬುಧವಾರ, ಅಕ್ಟೋಬರ್ 27, 2010

ಹೆಸರು ಮರೆಯಬೇಕಿದೆ..!!

[ ಈ ಕವಿತೆ ನಂಗೆ ತುಂಭಾ ಇಷ್ಟವಾಯಿತು ಅದಕ್ಕೆ ಈ ಕವಿತೆಯನ್ನು ಸಾವಿರ ಕನಸಿನಲ್ಲಿ ಕವಿಯ ಅನುಮತಿ ಇಲ್ಲದೆ ಹಾಕುತ್ತಿದ್ದೆನೆ .ಕವಿತೆ ಬರೆದ ಕವಿಯ ಹೆಸರು ಸರಿಯಾಗಿ ನೆನಪಿಲ್ಲ ಅವರ ಹೆಸರು ಬಹುಶಃ ವಿ.ಭಟ್ಟ ಅಂತ ಇರಬೇಕು.ಅಪರೋಕ್ಷವಾಗಿ ಅನುಮತಿ ನೀಡಿದ ಕವಿಗೆ ಧನ್ಯವಾದಗಳು ]


ನೀನೊಲಿದರೆ ಕೊರಡು ಕೊನರುವದೆಂದು
ಹಗಲು ರಾತ್ರಿ ಕಾದಿದ್ದೆ
ಅದು ಗೆದ್ದಲು ಹಿಡಿದದ್ದು ಗೋತ್ತಾಗಲ್ಲಿಲ್ಲ


ನಿರೀಕ್ಷೆಯಲ್ಲಿ ಹಚ್ಚಿಟ್ಟ ಹೊಸ್ತಿಲ ದೀಪ
ಆಗಲೇ ನಂದಿರಬೇಕು, ಪ್ರೀತಿ ಕಳೆದ ಮೇಲೆ
ನವಿಲುಗರಿ ನೆಲಗುಡಿಸಲಿಕ್ಕೆ ಲಾಯಕ್ಕಲ್ಲವೇ..?


ಪ್ರೀತಿ ಪ್ರಣತಿಯಂಥದ್ದು ಎಂದಿದ್ದೆ ನೀನು
ಕರಗಿ ಉರಿದೆ ನೀನು
ನೀ ಮೈಯಷ್ಟೇ ಕಾಯಿಸಿಕೊಂಡೆ


ನಿನ್ನ ಬಗ್ಗೆ ಬರೆದ ಕವಿತೆಯ
ಮೊದಲ ಚರಣ ಗೆದ್ದಲು ತಿಂದಿದೆ
ಕವಿತೆಯ ಹೆಸರು-ಮರೆಯಬೇಕಿದೆ


ಕಳೆದು ಹೋದರೆ ಹೋಗಲೆಂದು ಬಿಸಾಡಿದ್ದ
ನೆನಪು ಮಾತ್ರ ಆಗಾಗ
ಮಂಚದ ಬಳಿ ಕಾಲಿಗೆ ಸಿಕ್ಕುತ್ತದೆ


ಪ್ರೀತಿಗೆ ನೆಪವಿಲ್ಲವೆಂದು
ಹೇಳಿದ್ದೆ ನೀನು, ನಂಬಿದ್ದೆ ನಾನು
ನೀ ಹೊಗಿದ್ದರ ಕಾರಣ ಕೇಳಿರಲಿಲ್ಲ


ಹುಚ್ಚ ಪ್ರೀತಿಯಲ್ಲಿ ಅಂದುಕೊಂಡಿದ್ದೆ
ಸತ್ತರೆ ಸಮಾಧಿ ನಿನ್ನ ಮನೆಯಿರುವ ಬೀದಿಯಲ್ಲಿ ಎಂದು
ಪುಣ್ಯಕ್ಕೆ ಅಲ್ಲಿ ಜಾಗವಿಲ್ಲ..!!